ತಾರಕ
ಒಬ್ಬ ರಾಕ್ಷಸ. ಮತ್ಸ್ಯ ಮತ್ತು ಸ್ಕಾಂಧ ಪುರಾಣದ ಮಾಹೇಶ್ವರ ಖಂಡದಲ್ಲಿ ಈತನ ಕಥೆ ಬರುತ್ತದೆ. ಈತ ವಜ್ರಾಂಗ ಮತ್ತು ವಜ್ರಾಂಗಿಯರ ಮಗ. ಇವನಿಗೆ ತಾರಾಕ್ಷ. ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಎಂಬ ಮೂರು ಮಕ್ಕಳಿದ್ದರು. ಈ ಮೂವರೂ ಬ್ರಹ್ಮನನ್ನು ಕುರಿತು ಉಗ್ರವಾದ ತಪಸ್ಸು ಮಾಡಿ, ಅನೇಕ ವರಗಳನ್ನು ಪಡೆದು ಕ್ರಮವಾಗಿ ಹೊನ್ನು, ಬೆಳ್ಳಿ ಮತ್ತು ಕಬ್ಬಿಣದ ಊರುಗಳನ್ನು ಕಟ್ಟಿಕೊಂಡು ಪ್ರಜಾಪೀಡನೆ ಮಾಡುತ್ತಿರುತ್ತಾರೆ. ಈಶ್ವರ ಈ ಮೂವರನ್ನೂ ಕೊಂದು ತ್ರಿಪುರಾರಿ ಎನಿಸಿಕೊಳ್ಳುತ್ತಾನೆ.

ತಾರಕ ಪಾರಿಯಾತ್ರ ಪರ್ವತದಲ್ಲಿ ತಪಸ್ಸು ಮಾಡಿ, ಅಂದಿನವರೆಗೆ ಅವತರಿಸಿದ್ದ ಒಂದು ಎರಡು, ಮೂರು, ನಾಲ್ಕು, ಐದು ಮುಖಗಳುಳ್ಳ ಯಾವ ದೇವತೆಯಿಂದಲೂ ತನಗೆ ಸಾವು ಸಂಭವಿಸದೇ ಇರುವಂಥ ವರವನ್ನು ಬ್ರಹ್ಮನಿಂದ ಪಡೆದು ದೇವತೆಗಳನ್ನೆಲ್ಲ ಭಂಗಗೊಳಿಸಿ, ಮಹೇಂದ್ರಾದಿಗಳಿಗೆ ಸಹಿಸಲಸಾಧ್ಯವಾದ ಕಿರುಕುಳವನ್ನು ಕೊಡುತ್ತ, ಅಜೇಯನಾಗಿ, ಬಲಿಷ್ಠ ರಾಕ್ಷಸನಾಗಿ ಮೆರೆಯುತ್ತಾನೆ. ಜಂಭ, ಕುಂಭಜ, ಮಹಿಷಾಸುರ, ಕುಂಜರ, ಮೇಘ, ಕಾಲ ನೇಮಿ, ನಿಮಿ, ಮಥನ, ಜಂಭಕ, ಶುಂಭ, ನಿಶುಂಭ ಮೊದಲಾದವರನ್ನು ತನ್ನ ಪ್ರಧಾನ ದಂಡನಾಯಕರನ್ನಾಗಿ ನೇಮಿಸಿಕೊಂಡು ಮೂರು ಲೋಕಗಳನ್ನೂ ಹಿಂಸಿಸುತ್ತಿರುತ್ತಾನೆ. ಇವನ ಈ ದಂಡನಾಯಕರಲ್ಲಿ ಶುಂಭನೇ ಪ್ರಧಾನ ದಂಡನಾಯಕನಾಗಿ ಎಲ್ಲ ಯುದ್ಧಕಾರ್ಯಾಚರಣೆಗಳನ್ನೂ ನಡೆಸುತ್ತಿರುತ್ತಾನೆ.

ತಾರಕಾಸುರನ ಉಪಟಳವನ್ನು ಸಹಿಸಲಾರದ ದೇವತೆಗಳ ಮೊರೆಯನ್ನು ಕೇಳಿ ಕುಮಾರಸಂಭವಕ್ಕೆ ಈಶ್ವರ ಅಣಿಯಾಗುತ್ತಾನೆ. ಏಳು ದಿನದ ಬಾಲಕನಿಂದ ತಾರಕನ ವಧೆಯಾಗಬೇಕಾಗಿದ್ದುದರಿಂದ, ಶಿವನ ಅಂಶಾವತಾರಿಯಾದ ಷಣ್ಮುಖನಿಂದ ಮಾತ್ರ ಹುಟ್ಟಿದ ಏಳು ದಿವಸದೊಳಗೆ, ತಾರಕಾಸುರನನ್ನು ಕೊಲ್ಲುವುದು ಸಾಧ್ಯವಾಗುತ್ತದೆ. ಅಂತೂ ದೇವತೆಗಳೂ, ರಾಕ್ಷರಸರೂ, ಗಂಗಾ - ಯಮುನಾ ನದಿಗಳ ಮಧ್ಯದಲ್ಲಿದ್ದ ಅಂಥರ್ವೇದಿ ಎಂಬ ಸ್ಥಳದಲ್ಲಿ ತಮ್ಮ ತಮ್ಮ ಚದುರಂಗ ಬಲವನ್ನು ನಾನಾ ವಿಧವಾದ ವ್ಯೂಹಗಳಲ್ಲಿ ರಚಿಸಿ ಯುದ್ಧಮಾಡುತ್ತಾರೆ. ಪ್ರಾರಂಭದಲ್ಲಿ ಮಾಂಧಾತೃವಿನ ಮಗನಾದ ಮುಚುಕುಂದ ತಾರಕನೊಡನೆ ಯುದ್ಧಮಾಡಿ ಆತನ ಶಕ್ತ್ಯಾಯುಧದ ಪೆಟ್ಟಿನಿಂದ ಭೂಶಯ್ಯಾಗತನಾಗುತ್ತಾನೆ. ಅನಂತರ ಶಿವನ ಅಂಶದಿಂದಲೇ ಹುಟ್ಟಿದ ವೀರಭದ್ರ ಸಹ ರೋಷಾವೇಶದಿಂದ ಹೋರಾಡಿ ಮೂರ್ಛೆ ಹೋಗುತ್ತಾನೆ. ಕೊನೆಗೆ ವಿಷ್ಣುವಿನ ಮಾತಿನಂತೆ ಕುಮಾರಸ್ವಾಮಿ ತಾರಕನ ಮೇಲೆ ಯುದ್ಧಕ್ಕೆ ಬರುತ್ತಾನೆ. ಶಕ್ತ್ಯಾಯುಧವನ್ನು ಹಿಡಿದು ಕಾಲ್ನಡಿಗೆಯಲ್ಲಿಯೇ ತನ್ನ ಬಳಿಗೆ ಕುಮಾರನನನ್ನು ತಾರಕ ಶಕ್ತ್ಯಾಯುಧದಿಂದಲೇ ಸ್ವಾಗತಿಸಿ ಎಳೆಯನನ್ನು ಯುದ್ಧಕ್ಕೆ ಕಳುಹಿಸಿದ ದೇವತೆಗಳನ್ನು ಧಿಕ್ಕರಿಸಿ ನುಡಿದು, ಮಧ್ಯೆ ಬಂದ ಮಹೇಂದ್ರನನ್ನು ಆತನ ಐರಾವತ ಸಹಿತ ನೆಲಕ್ಕೆ ಉರುಳಿಸಿ, ಹೋರಾಡುತ್ತಾನೆ. ಕುಮಾರನ ಸಹಾಯಕ್ಕೆ ಬಂದ ವೀರಭದ್ರನನ್ನು ಹೊಡೆದು ಮತ್ತೊಮ್ಮೆ ಮೂರ್ಛೆಗೊಳಿಸುತ್ತಾನೆ. ಆಗ ಕುಮಾರ ಸ್ವಾಮಿ ವೀರಭದ್ರನನ್ನು ತಡೆದು, ತನ್ನ ರಕ್ಷಣೆಗೆ ಧಾವಿಸಿದ ಸಮಸ್ತ ಪರ್ವತಗಳನ್ನೂ ನಿಲ್ಲಿಸಿ, ಘನ ಘೋರ ಯುದ್ಧಮಾಡಿ ತನ್ನ ಶಕ್ತ್ಯಾಯುಧದಿಂದ ತಾರಕನನ್ನು ಹೊಡೆದು ಕೊಲ್ಲುತ್ತಾನೆ.
ತಾರಕಾಸುರ ವಧೆ ಹಾಗೂ ಅದಕ್ಕೆ ಕಾರಣನಾದ ಕುಮಾರ ಸಂಭವದ ಕಥೆಗಳು ಅನೇಕ ಕಾವ್ಯಗಳಿಗೆ ವಸ್ತುವಾಗಿವೆ.
(ಬಿ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ